ಔರಾದ: ಬೀದರ್ ಜಿಲ್ಲೆಯ ಒಂದು ತಾಲೂಕು ಮತ್ತು ಅದರ ಮುಖ್ಯಸ್ಥಳ. ಈ ತಾಲೂಕು ಕರ್ನಾಟಕ ರಾಜ್ಯದ ಅತ್ಯಂತ ಉತ್ತರದ ಗಡಿಯಲ್ಲಿದೆ. ಪಶ್ಚಿಮ ಮತ್ತು ಉತ್ತರದಲ್ಲಿ ಮಹಾರಾಷ್ಟ್ರ ಪುರ್ವದಲ್ಲಿ ಆಂಧ್ರ ಪ್ರದೇಶ, ದಕ್ಷಿಣದಲ್ಲಿ ಭಾಲ್ಕಿ ಮತ್ತು ಬೀದರ್ ತಾಲೂಕುಗಳು ಸುತ್ತವರಿದಿವೆ. 149 ಗ್ರಾಮಗಳಿವೆ. ತಾಲೂಕಿನ ವಿಸ್ತೀರ್ಣ 1228.6ಚ.ಕಿಮೀ. ಜನಸಂಖ್ಯೆ 2,45,099.

ಮಾಂಜರಾ ನದಿ ಈ ತಾಲ್ಲೂಕಿನ ದಕ್ಷಿಣದಲ್ಲಿ ಪಶ್ಚಿಮದಿಂದ ಪುರ್ವಕ್ಕೆ ಹರಿದು ತಾಲೂಕು ಗಡಿಯಾಗಿ ಔರಾದವನ್ನು ಭಾಲ್ಕಿ ಮತ್ತು ಬೀದರ್ ತಾಲೂಕುಗಳಿಂದ ಬೇರ್ಪಡಿಸುತ್ತದೆ. ಬೀದರ್ ಜಿಲ್ಲೆಯ ಇತರ ತಾಲೂಕುಗಳಿಗಿಂತ ಈ ತಾಲೂಕಿನಲ್ಲಿ ಅರಣ್ಯಪ್ರದೇಶ ಹೆಚ್ಚು. ಈ ತಾಲೂಕು ಎರೆಮಣ್ಣಿನಿಂದ ಕೂಡಿದ್ದು ಮಳೆ ಕಡಿಮೆ. ವಾರ್ಷಿಕ ಸರಾಸರಿ 910ಮಿಮೀ. ಜೋಳ, ಹತ್ತಿ, ಕಡಲೆ, ಗೋದಿ, ಸೇಂಗ, ತೊಗರಿ ಮತ್ತು ಉದ್ದು ಇಲ್ಲಿಯ ಬೆಳೆಗಳು. ತಾಲ್ಲೂಕಿನ ದೇವಣಿ ತಳಿಯ ಎತ್ತುಗಳು ಪ್ರಸಿದ್ಧವಾದವು. ತಾಲ್ಲೂಕಿನಲ್ಲಿ ಹತ್ತಿ ಕಾರ್ಖಾನೆಗಳು, ಮರಕೊಯ್ಯುವ ಮತ್ತು ಹೆಂಚಿನ ಕಾರ್ಖಾನೆಗಳು ಇವೆ. ವಿಕಾರಾಬಾದ್ ಪರಭಣಿ ರೈಲುಮಾರ್ಗ ತಾಲ್ಲೂಕಿನ ಪಶ್ಚಿಮದ ಭಾಗಗಳಲ್ಲಿ ಕಮಾಲನಗರದ ಮೂಲಕ ಹಾದುಹೋಗಿದೆ. ಜೊತೆಗೆ ಉತ್ತಮ ರಸ್ತೆಗಳಿವೆ.

ಔರಾದ ಈ ತಾಲೂಕು ಮತ್ತು ಹೋಬಳಿ ಕೇಂದ್ರ. ಜನಸಂಖ್ಯೆ 16,189. ಇಲ್ಲಿ ಅಮರೇಶ್ವರನ ದೇವಾಲಯವಿದೆ. ಪ್ರತಿ ವರ್ಷ ಶಿವರಾತ್ರಿಗೆ ಇಲ್ಲಿ ಜಾತ್ರೆ ನಡೆಯುತ್ತದೆ.			(ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ